ಹಣ ದುರುಪಯೋಗ ಸಾಬೀತು!: ನೆಲ್ಲಿಕಾರು ಮಾಜಿ ಅಧ್ಯಕ್ಷೆಗೆ 6 ವರ್ಷ ಚುನಾವಣೆ ಸ್ಪರ್ಧೆಗೆ ನಿಷೇಧ

BIDIRE NEWS

ಮೂಡುಬಿದಿರೆ: ನೆಲ್ಲಿಕಾರು ಗ್ರಾಮ ಪಂಚಾಯತ್‌ನಲ್ಲಿ ನಡೆದ ಸರ್ಕಾರಿ ಹಣ ದುರುಪಯೋಗ ಪ್ರಕರಣದಲ್ಲಿ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಉಪಾಧ್ಯಕ್ಷೆಯಾಗಿದ್ದ ಸುಶೀಲಾ ಅವರನ್ನು ಸದಸ್ಯತ್ವ ಮತ್ತು ಉಪಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಮುಂದಿನ ಆರು ವರ್ಷಗಳ ಕಾಲ ಯಾವುದೇ ಪಂಚಾಯತ್ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಪಂಚಾಯತ್ ರಾಜ್ ಪ್ರಾದೇಶಿಕ ಆಯುಕ್ತರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.


ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಕಲಂ 43(ಜೆ)(2)ರ ಅನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ಆರು ವರ್ಷಗಳ ಕಾಲ ಚುನಾವಣಾ ಸ್ಪರ್ಧೆಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ.

ರೂ.48,289 ನಷ್ಟಕ್ಕೆ ಶೇ.8 ಬಡ್ಡಿ ಸಹಿತ ವಸೂಲಿ

ತನಿಖೆಯಲ್ಲಿ ರೂ.48,289 ಮೊತ್ತದ ಸರ್ಕಾರಿ ಹಣಕ್ಕೆ ಆರ್ಥಿಕ ನಷ್ಟ ಉಂಟಾಗಿರುವುದು ಸಾಬೀತಾದ ಹಿನ್ನೆಲೆ, ನಷ್ಟ ಉಂಟಾದ ದಿನಾಂಕದಿಂದ ಶೇ.8ರ ಬಡ್ಡಿದರದೊಂದಿಗೆ ಮೊತ್ತವನ್ನು ವಸೂಲಿ ಮಾಡುವಂತೆ ಆದೇಶಿಸಲಾಗಿದೆ. ವಸೂಲಾತಿ ಪ್ರಕ್ರಿಯೆಯನ್ನು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ–1993ರ ಕಲಂ 246(8)ರನ್ವಯ ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯ ಮೂಲಕ ಜರುಗಿಸುವಂತೆ ಸೂಚಿಸಲಾಗಿದೆ.


ಉದ್ಯೋಗ ಖಾತ್ರಿ ಕಾಮಗಾರಿಗಳಲ್ಲೂ ಅಕ್ರಮ

ಸುಶೀಲಾ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಾಂಟ್ರಾಡಿ ಸರ್ಕಾರಿ ಶಾಲೆಯ ಮಳೆನೀರು ಕೊಯ್ಲು ಕಾಮಗಾರಿ, ಗ್ರಾಮ ಪಂಚಾಯತ್ ಕಚೇರಿ ಬಳಿಯ ಕೊಳವೆ ಬಾವಿಗೆ ಜಲಮರುಪೂರಣ ಘಟಕ ನಿರ್ಮಾಣ ಹಾಗೂ ಈಶ್ವರಬೆಟ್ಟುವಿನಿಂದ ಹಂಪೇಜಾಲವರೆಗೆ ಸಾರ್ವಜನಿಕ ತೋಡಿನ ಹೂಳೆತ್ತುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.


ಒಂಬುಡ್ಸ್‌ಮನ್ ದೂರು ಬಳಿಕ ತನಿಖೆ

ಗ್ರಾಮಸ್ಥ ಪ್ರಕಾಶ್ ಬಿನ್ ವಾಸು ಪೂಜಾರಿ ಅವರಿಂದ ಒಂಬುಡ್ಸ್‌ಮನ್‌ಗೆ ಸಲ್ಲಿಸಲಾದ ದೂರಿನ ಮೇರೆಗೆ ತನಿಖೆ ನಡೆಸಲಾಗಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಉಗ್ಗಪ್ಪ ಮೂಲ್ಯ ಅವರು ಅವ್ಯವಹಾರದಲ್ಲಿ ಭಾಗಿಯಾಗಿರುವುದು ಸಾಬೀತಾಗಿ, ಅವರಿಂದ ಈಗಾಗಲೇ ಇಲಾಖಾ ಮಟ್ಟದಲ್ಲಿ ಹಣ ವಸೂಲಿ ಮಾಡಲಾಗಿದೆ.

ಆದರೆ ಸುಶೀಲಾ ಅವರು ಇಲಾಖಾ ವಿಚಾರಣೆಗೆ ಹಾಜರಾಗದೆ, ನಷ್ಟ ಮೊತ್ತವನ್ನು ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಇದೀಗ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.


slider