ಮೂಡುಬಿದಿರೆ: ಕರಾವಳಿಯ ಸಾಂಸ್ಕೃತಿಕ ಹೆಮ್ಮೆಯ ಕ್ರೀಡೆಯಾದ ಕಂಬಳಕ್ಕೆ ಈ ಬಾರಿ ಪರಿಸರದ ಕಾಳಜಿಯ ಸ್ಪರ್ಶ ಲಭಿಸಿದೆ. ಬೆದ್ರ ಕಂಬಳ ಸಮಿತಿ ಆಶ್ರಯದಲ್ಲಿ ನಡೆಯಲಿರುವ ಪ್ರಸಕ್ತ ಸಾಲಿನ ‘ಕೋಟಿ–ಚೆನ್ನಯ ಜೋಡುಕರೆ ಕಂಬಳ’ವನ್ನು ಸಂಪೂರ್ಣ ಶೂನ್ಯ ತ್ಯಾಜ್ಯ ಮಾದರಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಪುರಸಭಾ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಜರುಗಿತು.
ಕಂಬಳದ ಆವರಣವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ವಲಯವಾಗಿ ರೂಪಿಸುವ ಸಂಕಲ್ಪವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಪ್ಲಾಸ್ಟಿಕ್ ಬಳಕೆ ನಿಷೇಧ:
ಪರಿಸರ ಸ್ನೇಹಿ ಕಂಬಳ ಆಯೋಜನೆಯ ಉದ್ದೇಶದಿಂದ ಏಕಬಳಕೆಯ ಪ್ಲಾಸ್ಟಿಕ್, ಥರ್ಮಾಕೋಲ್ ತಟ್ಟೆ, ಪೇಪರ್ ಲೋಟ, ಪ್ಲಾಸ್ಟಿಕ್ ಚಮಚಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ನಿರ್ಧಾರ ಕೈಗೊಳ್ಳಲಾಯಿತು. ಕಂಬಳ ಸ್ಥಳದಲ್ಲಿ ಆಹಾರ ವಿತರಿಸುವ ವ್ಯಾಪಾರಿಗಳು ಕಡ್ಡಾಯವಾಗಿ ಅಡಿಕೆ ಹಾಳೆ, ಬಾಳೆ ಎಲೆ, ಸ್ಟೀಲ್ ಪಾತ್ರೆ ಹಾಗೂ ಬಯೋಡಿಗ್ರೇಡೆಬಲ್ ತಯಾರಿಸಿದ ವಸ್ತುಗಳನ್ನೇ ಬಳಸಬೇಕು ಎಂದು ಸೂಚನೆ ನೀಡಲಾಯಿತು.
ಸಾರ್ವಜನಿಕರ ಅನುಕೂಲಕ್ಕಾಗಿ ಪರಿಸರ ಸ್ನೇಹಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಕಂಬಳ ಆವರಣದಲ್ಲಿ ತೆರೆಯಲು ನಿರ್ಧರಿಸಲಾಯಿತು.
ಸಭೆಯಲ್ಲಿ ಕೋಟಿ–ಚೆನ್ನಯ ಕಂಬಳ ಸಮಿತಿ ಕಾರ್ಯದರ್ಶಿ, ಪುರಸಭೆ ನಿರ್ಗಮಿತ ಉಪಾಧ್ಯಕ್ಷ ನಾಗರಾಜ್ ಪೂಜಾರಿ ಸಭೆಯಲ್ಲಿ ಮಾತನಾಡಿ, ಪುರಸಭೆ ಹಾಗೂ ಕಂಬಳ ಸಮಿತಿ ಜಂಟಿಯಾಗಿ ಅಭಿಯಾನ ಕೈಗೊಳ್ಳುತ್ತಿದೆ. ಇದರ ಯಶಸ್ಸಿಗೆ ಕಂಬಳ ಅಭಿಮಾನಿಗಳ ಸಹಕಾರ ಮುಖ್ಯ. ರಸ್ತೆ ಬದಿ, ಕಂಬಳ ಕರೆ ಬಳಿ, ಆಹಾರ ಮಳಿಗೆಗಳ ಸುತ್ತಮುತ್ತ ಕಸ ಬಿಸಾಡಲು ಚೀಲಗಳನ್ನು ಇರಿಸುತ್ತೇವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಉದ್ಯಮಿ ಗೋಪಾಲ ಮೊಯ್ಲಿ, ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಹೆಗ್ಡೆ, ಪುರಸಭೆ ಸ್ವಚ್ಛತಾ ರಾಯಭಾರಿ ಸಂಧ್ಯಾ ಅಳಕೆ, ಪರಿಸರ ಅಭಿಯಂತರೆ ಶಿಲ್ಪಾ ಎಸ್., ಆರೋಗ್ಯ ನಿರೀಕ್ಷಕಿ ಶಶಿರೇಖಾ,ನೇತಾಜಿ ಬ್ರಿಗೇಡ್ ಸಹ ಸಂಚಾಲಕ ಎಸ್. ಕುಮಾರ್ ಉಪಸ್ಥಿತರಿದ್ದರು.
ಮಹಮ್ಮದ್ದೀಯ ಶಾಲೆಯ ಜೀರೋ ವೇಸ್ಟ್ ಕೋ–ಆರ್ಡಿನೇಟರ್ ತೇಜಸ್ ದಾಸ್, ಸಾಹಸ್ ಸಂಸ್ಥೆಯ ಅಭಿಷೇಕ್, ಶ್ರವಣ್, ಕಾಕುಂಜೆ ವೆಲ್ನೆಸ್‌ನ ಡಾ. ಪ್ರಸನ್ನ, ಸೂಪರ್ವೈಸರ್ ವಿನಾಯಕ, ಚಾಲಕ ವಿಕ್ರಂ, ಸೋಶಿಯಲ್ ಮೀಡಿಯಾ ಪ್ರತಿನಿಧಿ ತಿಲಕ್ ಹಾಗೂ ಕಮ್ಯೂನಿಟಿ ಮೊಬಿಲೈಸರ್‌ಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಅನುಷಾ ಸ್ವಾಗತಿಸಿ, ಅಮಿತಾ ವಂದಿಸಿದರು.
ಆಮಂತ್ರಣ ಪತ್ರಿಕೆಯಲ್ಲಿ ಜಾಗೃತಿ:
ಸಮಿತಿಯು ಕಳೆದ ನಾಲ್ಕು ವರ್ಷಗಳಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ‘ಶೂನ್ಯ ತ್ಯಾಜ್ಯ ಅಭಿಯಾನ’ದ ಕುರಿತು ಜಾಗೃತಿ ಸಂದೇಶ ಮುದ್ರಿಸುವ ಮೂಲಕ ತನ್ನ ಕಾಳಜಿಯನ್ನು ಮೆರೆದಿದೆ. “ಸ್ವಚ್ಛ–ಸ್ವಸ್ಥ–ಸುಂದರ ಮೂಡುಬಿದಿರೆ” ಕನಸನ್ನು ನನಸಾಗಿಸಲು ಪ್ರತಿಯೊಬ್ಬ ಕಂಬಳ ಅಭಿಮಾನಿಯೂ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಸಮಿತಿ ಮನವಿ ಮಾಡಿದೆ.


