ಪೆರಿಂಜೆ ಮೂಲದ ಜೋಸೆಫ್ ಪಿಯೂಸ್ ತಾವ್ರೋ ಹೃದಯಾಘಾತದಿಂದ ನಿಧನ

BIDIRE NEWS
ಮುಂಬೈ: ಕರ್ನಾಟಕ ಕರಾವಳಿಯ ಮೂಡಬಿದ್ರೆ ಪಡ್ಯಾರಬೆಟ್ಟು ಸಮೀಪದ ಪೆರಿಂಜೆ ಗ್ರಾಮದ ಥೋಮಸ್ ಐರೊಸ್ ತಾವ್ರೋ ಅವರ ಪುತ್ರ ಜೋಸೆಫ್ ಪಿಯೂಸ್ ತಾವ್ರೋ (61) ಅವರು ಕಳೆದ ಶನಿವಾರ ತಡರಾತ್ರಿ ಅಂಧೇರಿ ಪೂರ್ವದ ಜೆ.ಬಿ.ನಗರದಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನರಾದರು.


ಈ ಹಿಂದೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಜೋಸೆಫ್ ಪಿಯೂಸ್ ತಾವ್ರೋ ಅವರು ಬಳಿಕ ಸ್ವವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಅಪಾರ ಜ್ಞಾನ, ಅನುಭವ ಹೊಂದಿದ್ದ ಅವರು ರಾಷ್ಟ್ರದ ಹಲವು ಪ್ರಮುಖ ವ್ಯಕ್ತಿಗಳು, ರಾಜಕಾರಣಿಗಳು ಹಾಗೂ ಉನ್ನತಾಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಪರೋಪಕಾರಿ ಮನೋಭಾವದಿಂದ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದರು.

ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೆಳ್ತಂಗಡಿ ತಾಲೂಕಿನ ಪೆರಿಂಜೆ ಪದ್ದಂಡಡ್ಕದಲ್ಲಿ ಪೂರ್ಣಗೊಳಿಸಿದ್ದ ಅವರು ಸುಮಾರು ಹದಿನಾರನೇ ವಯಸ್ಸಿನಲ್ಲಿ ಮುಂಬಯಿಗೆ ತೆರಳಿ ದುಡಿತ ಆರಂಭಿಸಿದ್ದರು. ನಂತರ ಹೈದರಾಬಾದ್ ಹಾಗೂ ದೆಹಲಿಯಲ್ಲಿ ಸೇವೆ ಸಲ್ಲಿಸಿದ್ದು, ಕಳೆದ ಸುಮಾರು ನಾಲ್ಕೂವರೆ ದಶಕಗಳಿಂದ ಕುಟುಂಬಸ್ಥರಿಂದ ದೂರವಾಸದಲ್ಲಿದ್ದರು ಎಂದು ತಿಳಿದುಬಂದಿದೆ.

ಜೋಸೆಫ್ ಪಿಯೂಸ್ ತಾವ್ರೋ ಅವರ ನಿಧನದ ವಿಷಯ ತಿಳಿದ ಕೂಡಲೇ ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಎಸ್. ಶೆಟ್ಟಿ ಪಣಕಜೆ ಅವರು ಮೃತರ ತವರಿನ ಸಂಪರ್ಕವನ್ನು ಪತ್ತೆಹಚ್ಚಿ, ತವರೂರಿನಿಂದ ಸೋದರ ಪುತ್ರರಾದ ಜೋನ್ ತಾವ್ರೋ ಹಾಗೂ ಅವಿಲ್ ತಾವ್ರೋ ಅವರನ್ನು ಮುಂಬಯಿಗೆ ಕರೆಸಿದರು.

ನಂತರ ಅಂಧೇರಿ ಪಶ್ಚಿಮದ ಆರ್.ಎನ್. ಕೂಪರ್ ಮುನ್ಸಿಪಲ್ ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ತವರೂರಲ್ಲೇ ಅಂತ್ಯಕ್ರಿಯೆ ನೆರವೇರಿಸುವ ಉದ್ದೇಶದಿಂದ ಪಾರ್ಥಿವ ಶರೀರವನ್ನು ಅಂಬ್ಯುಲೆನ್ಸ್ ಮೂಲಕ ಮೂಡಬಿದ್ರೆಗೆ ರವಾನಿಸುವ ವ್ಯವಸ್ಥೆಯನ್ನು ವಿಜಯ್ ಶೆಟ್ಟಿ ಪಣಕಜೆ ಅವರು ಮಾಡಿದರು.
ಮೃತರ ಅಂತ್ಯಕ್ರಿಯೆ ಮೂಡುಬಿದಿರೆ ಕಲ್ಲಬೆಟ್ಟು ಸಮೀಪದ ಗಂಟಲ್‌ಕಟ್ಟೆಯ ಸಹಾಯ ಮಾತೆಯ ದೇವಾಲಯದಲ್ಲಿ ಜ.28ರಂದು ಬೆಳಿಗ್ಗೆ ಸಾರ್ವಜನಿಕ ದರ್ಶನದ ಬಳಿಕ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
slider