ಮೂಡುಬಿದಿರೆ: ಗ್ರಾಮೀಣ ಭಾಗದ ಜನರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತಂದ 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ' (ನರೇಗಾ), ಇಂದು ಹತ್ತಾರು ಕುಟುಂಬಗಳ ಬದುಕಿಗೆ ಆಸರೆಯಾಗಿದೆ. ಇದಕ್ಕೆ ತಾಜಾ ಉದಾಹರಣೆ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊನ್ನೆಪದವು ನಿವಾಸಿ ರೇಮಂಡ್ ಲೋಬೋ.
ಸಮಗ್ರ ಕೃಷಿಗೆ ನರೇಗಾ ಸಾಥ್:
ಸಣ್ಣ ಮಟ್ಟದ ಕೃಷಿಕರಾಗಿರುವ ರೇಮಂಡ್ ಅವರು ತಮ್ಮ ಅಲ್ಪ ಜಾಗದಲ್ಲೇ ಅಡಿಕೆ ಕೃಷಿ, ಹಂದಿ ಸಾಕಾಣಿಕೆ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 2022-23ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಅಡಿಕೆ ಸಸಿಗಳನ್ನು ನೆಟ್ಟಿದ್ದು, ಅವು ಇಂದು ಸಮೃದ್ಧವಾಗಿ ಬೆಳೆದು ನಿಂತಿವೆ. ಹಂದಿ ಸಾಕಾಣಿಕೆಗಾಗಿ ಸುಸಜ್ಜಿತ ಶೆಡ್ ಮತ್ತು ಗೊಬ್ಬರ ಗುಂಡಿಯನ್ನೂ ಕೂಡ ಇದೇ ಯೋಜನೆಯಡಿ ನಿರ್ಮಿಸಿಕೊಂಡು ಲಾಭದಾಯಕ ಕೃಷಿಯತ್ತ ಹೆಜ್ಜೆ ಇಟ್ಟಿದ್ದಾರೆ.
ತ್ಯಾಜ್ಯದಿಂದ ಅಡುಗೆ ಅನಿಲ: ಮಾದರಿ ಹೆಜ್ಜೆ
ಹೈನುಗಾರಿಕೆಯಲ್ಲಿ ತೊಡಗಿರುವ ಇವರು ದನಗಳಿಂದ ಸಿಗುವ ಸೆಗಣಿಯನ್ನು ಕೇವಲ ಗೊಬ್ಬರವಾಗಿ ಬಳಸದೆ, ಅದನ್ನು ಇಂಧನವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. 2024-25ನೇ ಸಾಲಿನಲ್ಲಿ ಸುಮಾರು 20 ಸಾವಿರ ರೂ. ವೆಚ್ಚದಲ್ಲಿ ಬಯೋಗ್ಯಾಸ್ ಘಟಕ ನಿರ್ಮಿಸಿದ್ದಾರೆ. ಇದಕ್ಕೆ ನರೇಗಾದಿಂದ ಒಟ್ಟು 19,350 ರೂ. (ಕೂಲಿ ಮತ್ತು ಸಾಮಗ್ರಿ ವೆಚ್ಚ ಸೇರಿ) ಅನುದಾನ ದೊರೆತಿದೆ. ಈ ಘಟಕದ ಮೂಲಕ ಉತ್ಪತ್ತಿಯಾಗುವ ಅನಿಲವನ್ನು ಪೈಪ್ ಮೂಲಕ ಅಡುಗೆ ಮನೆಗೆ ಸಂಪರ್ಕಿಸಲಾಗಿದ್ದು, ಇದರಿಂದ ಇಂಧನ ವೆಚ್ಚ ಗಣನೀಯವಾಗಿ ಉಳಿತಾಯವಾಗುತ್ತಿದೆ.
ಸ್ವಾವಲಂಬನೆಯ ಮಂತ್ರ:
"ಮನಸಿದ್ದರೆ ಮಾರ್ಗ" ಎಂಬಂತೆ ಕಡಿಮೆ ಜಾಗದಲ್ಲೇ ಚೊಕ್ಕದಾದ ಬಯೋಗ್ಯಾಸ್ ಘಟಕ ಸ್ಥಾಪಿಸಿರುವ ರೇಮಂಡ್ ಲೋಬೋ, ಗ್ರಾಮದ ಇತರ ರೈತರಿಗೆ ಮಾದರಿಯಾಗಿದ್ದಾರೆ. ಈ ಹಿಂದೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಇವರು, ಇಂದು ತಮ್ಮ ಜಮೀನಿನಲ್ಲೇ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
"ನರೇಗಾ ಯೋಜನೆಯಿಂದ ಬಯೋ ಗ್ಯಾಸ್ ನಿರ್ಮಿಸಲು ಸಹಾಯಧನ ಸಿಕ್ಕಿದೆ. ಇದು ಕೃಷಿಕರಿಗೆ ಪೂರಕವಾದ ಯೋಜನೆಯಾಗಿದ್ದು, ಮುಂದಿನ ದಿನಗಳಲ್ಲಿ ಯೋಜನೆಯಡಿ ಇನ್ನಷ್ಟು ಸೌಲಭ್ಯ ಪಡೆಯುವ ಉದ್ದೇಶವಿದೆ."
— ರೇಮಂಡ್ ಲೋಬೋ, ಫಲಾನುಭವಿ
ವಿಶೇಷ ವರದಿ: ಪ್ರೇಮಶ್ರೀ ಕಲ್ಲಬೆಟ್ಟು

