ಮೂಡುಬಿದಿರೆ ಪುತ್ತಿಗೆಯ ಗಂಗಯ್ಯ ಗೌಡರಿಗೆ ಮೈಸೂರು ವಿಭಾಗ ಮಟ್ಟದ 'ಅತ್ಯುತ್ತಮ ಕೃಷಿ ಕಾರ್ಮಿಕ' ಪುರಸ್ಕಾರ

BIDIRE NEWS

ಮೂಡುಬಿದಿರೆ:  ತಾಲೂಕಿನ ಪುತ್ತಿಗೆ ಗ್ರಾಮದ ಪಾದೆ ಮನೆ ನಿವಾಸಿ ಶ್ರೀ ಗಂಗಯ್ಯ ಗೌಡ ಅವರು ಮೈಸೂರು ವಿಭಾಗ ಮಟ್ಟದ 'ಅತ್ಯುತ್ತಮ ಕೃಷಿ ಕಾರ್ಮಿಕ' ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷರಾದ ಕೃಷ್ಣರಾಜ ಹೆಗ್ಡೆ ಅವರು ತಿಳಿಸಿದ್ದಾರೆ.

ಶ್ರಮಜೀವಿ ಗಂಗಯ್ಯ ಗೌಡ:

ದಿವಂಗತ ತಿಮ್ಮ ಗೌಡ ಮತ್ತು ದಿವಂಗತ ಚೆನ್ನಮ್ಮ ದಂಪತಿಗಳ ಐವರು ಮಕ್ಕಳಲ್ಲಿ ಮೂರನೆಯವರಾಗಿ ಗಂಗಯ್ಯ ಗೌಡ ಅವರು 1942ರಲ್ಲಿ ಜನಿಸಿದರು. ಕಡು ಬಡತನದ ಕಾರಣ, ಪುತ್ತಿಗೆಯ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಯ ನಂತರ ಶಿಕ್ಷಣವನ್ನು ಮೊಟಕುಗೊಳಿಸಿದರು. ಜೀವನ ನಿರ್ವಹಣೆಗಾಗಿ ಆರಂಭದಲ್ಲಿ ಧಾರವಾಡದಲ್ಲಿ ಹೋಟೆಲ್ ಕೆಲಸಕ್ಕೆ ಸೇರಿಕೊಂಡ ಇವರು, ನಂತರ ಹುಟ್ಟೂರಿಗೆ ಹಿಂದಿರುಗಿ ಕೃಷಿ ಕಾರ್ಮಿಕರಾಗಿ ತಮ್ಮ ದುಡಿಮೆಯನ್ನು ಆರಂಭಿಸಿದರು.


ಕೃಷಿ ಮತ್ತು ಕುಶಲ ಕರ್ಮದಲ್ಲಿ ಪರಿಣತಿ:

ಗಂಗಯ್ಯ ಗೌಡ ಅವರು ಭತ್ತದ ಕೃಷಿಗೆ ಸಂಬಂಧಿಸಿದಂತೆ ಅಪಾರ ಅನುಭವವನ್ನು ಹೊಂದಿದ್ದಾರೆ. ಭತ್ತದ ಗದ್ದೆಯಲ್ಲಿ ಕೋಣಗಳಿಂದ ಉಳುಮೆ ಮಾಡುವುದು, ಗದ್ದೆ ಹದ ಮಾಡುವುದು, ನೇಜಿ ಬಿತ್ತನೆ, ನೀರಿನ ಮಟ್ಟದ ಲೆಕ್ಕಾಚಾರ, ನೇಜಿ ಹಾಕಿ ಭತ್ತ ಕೊಯ್ದು, ಭತ್ತ ಬಡಿದು, ಗಾಳಿಗೆ ತೂರಿ, ಸಿರಿತುಪ್ಪೆ, ತಟ್ಟಿ ತುಪ್ಪೆ (ಕಣಜ) ನಿರ್ಮಾಣ, ಬೈ ಹುಲ್ಲಿನ ಬಣವೆ ರಚನೆ, ಹಾಗೂ ಭತ್ತ ಕುಟ್ಟಿ ಅಕ್ಕಿ ಮಾಡಿ ಮುಡಿ ಕಟ್ಟುವವರೆಗಿನ ಹಂತ ಹಂತದ ಎಲ್ಲಾ ಪ್ರಕ್ರಿಯೆಗಳಲ್ಲಿ ಪ್ರವೀಣರಾಗಿದ್ದಾರೆ. ಕೃಷಿ ಕೆಲಸಗಳ ಜೊತೆಗೆ, ಬುಟ್ಟಿ ಮತ್ತು ಬಲೆ ಹೆಣೆಯುವುದು, ಮರದ ನೇಗಿಲು ತಯಾರಿಕೆಯಂತಹ ಕುಶಲ ಕೈಗಾರಿಕೆಗಳಲ್ಲೂ ಇವರು ಎತ್ತಿದ ಕೈ. ಬಾವಿ ತೋಡುವುದು, ಮರ ಕಡಿಯುವ ಕೆಲಸಗಳಲ್ಲೂ ನಿಷ್ಣಾತರಾಗಿದ್ದು, ಹಿಂದೆ ಕೈಯಿಂದಲೇ ಕೆಂಪು ಕಲ್ಲು ಕಡಿದು ಜೀವನ ಸಾಗಿಸಿದ ಅನುಭವ ಹೊಂದಿರುವ ನಿಜವಾದ ಶ್ರಮಜೀವಿಯಾಗಿದ್ದಾರೆ.


ಜಾನಪದ ಮತ್ತು ಧಾರ್ಮಿಕ ಸೇವೆ:

ಕುಡುಬಿ ಸಮುದಾಯದ ಸಂಸ್ಕೃತಿಯ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಗಂಗಯ್ಯ ಗೌಡ ಅವರು ಶ್ರೇಷ್ಠ ಜಾನಪದ ಕಲಾವಿದರೂ ಹೌದು. ಜನನ-ಮರಣದಿಂದ ಉತ್ತಾರಾದಿ ಕ್ರಿಯೆಯವರೆಗಿನ ಎಲ್ಲಾ ಸಾಂಸ್ಕೃತಿಕ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ ಅನುಭವಿಯಾಗಿದ್ದಾರೆ. ಮಹಾತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುತ್ತಿಗೆ ಇದರ ಸಮಗ್ರ ಜೀರ್ಣೋದ್ಧಾರದ ಸಂದರ್ಭದಲ್ಲಿ, ಆರಂಭದಿಂದ ಮುಕ್ತಾಯದವರೆಗೆ ನಿರಂತರವಾಗಿ ಕರಸೇವೆ ಮಾಡಿ 'ನಿತ್ಯ ಸ್ವಯಂ ಸೇವಕ' ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 

slider