ಕಾರ್ಕಳ: ಕ್ರಿಯೇಟಿವ್ ಕಾಲೇಜಿನ ವಾರ್ಷಿಕೋತ್ಸವ 'ಆವಿರ್ಭವ-2025'ಯು "ಸಿಂದೂರ ಸಂಭ್ರಮ" ಪರಿಕಲ್ಪನೆಯಲ್ಲಿ ಡಿಸೆಂಬರ್ ಮೂರು ದಿನಗಳು ನಡೆಯಿತು. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ರಾಜಕೀಯ, ಸಾಹಿತ್ಯ, ಕಲೆ ಮತ್ತು ಸಿನಿಮಾ ಕ್ಷೇತ್ರದ ದಿಗ್ಗಜರು ಭಾಗವಹಿಸಿದರು.
ಡಿಸೆಂಬರ್ 4ರಂದು ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಮೊದಲ ದಿನ ರಾತ್ರಿ ಕಾಲೇಜಿನ ಹವ್ಯಾಸಿ ಕಲಾವಿದರಿಂದ 'ಕ್ರಿಯೇಟಿವ್ ಯಕ್ಷಾರಾಧನಮ್' ಅಂಗವಾಗಿ 'ಶ್ರೀರಾಮಾನುಗ್ರಹ ಸಿಂದೂರ ವಿಜಯ' ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.
ಡಿಸೆಂಬರ್ 5ರಂದು ದಿ. ಎಚ್.ಎಸ್. ವೆಂಕಟೇಶಮೂರ್ತಿಯವರ ಸವಿ ನೆನಪಿನ ಕುರಿತ 'ಭಾವ ನಮನ' ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಖ್ಯಾತ ನಿರೂಪಕ ಅವಿನಾಶ್ ಕಾಮತ್ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭ ಜರುಗಿತು. ಕಾಲೇಜಿನ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಸ್ವಾಗತಿಸಿದರು.
ಎಸ್.ಕೆ.ಎಫ್ ಎಲಿಕ್ಸರ್ ಸಂಸ್ಥೆಯ ಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್ ಮಾತನಾಡಿ, "ಕಾಲೇಜುಗಳು ಬರೀ ಪಠ್ಯದ ಅಭ್ಯಾಸ ನೀಡುವ ಸ್ಥಳವಲ್ಲ. ವಿದ್ಯಾರ್ಥಿಗಳ ಸಾಮರ್ಥ್ಯವನ್ನೆತ್ತಿ ಹಿಡಿಯುವ ವೇದಿಕೆಗಳಾಗಬೇಕು,"ಎಂದು ಶ್ಲಾಘಿಸಿದರು.
ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್, ವಿಶ್ರಾಂತ ಪ್ರಾಚಾರ್ಯರಾದ ಕೆ. ಗುಣಪಾಲ್ ಕಡಂಬ, ಮತ್ತು 'ಸೋ ಫ್ರಮ್ ಸೋ' ಖ್ಯಾತಿಯ ನಟ ಶನಿಲ್ ಗೌತಮ್ (ರವಿ ಅಣ್ಣ) ತಮ್ಮ ಮಾತುಗಳಲ್ಲಿ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಕಾಲೇಜಿನ ಕಾರ್ಯವನ್ನು ಮೆಚ್ಚಿದರು.
ಕುದ್ರೋಳಿ ಗಣೇಶ್ ಮ್ಯಾಜಿಕ್ ಶೋ:
ಅಂತಾರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಅವರ ಮ್ಯಾಜಿಕ್ ಶೋ ಕಾರ್ಯಕ್ರಮ ನಡೆದು, ಎಲ್ಲರ ಮನಸೂರೆಗೊಂಡಿತು.
ಡಿಸೆಂಬರ್ 6ರಂದು ನಡೆದ ಸನ್ಮಾನ, ಸಾಹಿತ್ಯ ಸಂಭ್ರಮ ಮತ್ತು ಸಮಾರೋಪ ಸಮಾರಂಭದಲ್ಲಿ ಒಟ್ಟು 180 ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನದೊಂದಿಗೆ ಪ್ರೋತ್ಸಾಹ ಧನವನ್ನೂ ನೀಡಲಾಯಿತು.
ಮುಖ್ಯ ಅತಿಥಿ ವಿರೂಪಾಕ್ಷ ದೇವರಮನೆ ಅವರು ಮಾತನಾಡಿ, "ವಿದ್ಯಾರ್ಥಿಗಳ ಸಾಧನೆ ಎಂದರೆ ಕೇವಲ ಅಂಕಗಳಲ್ಲ. ವ್ಯಕ್ತಿತ್ವ ನಿರ್ಮಾಣವೂ ಅಷ್ಟೇ ಮಹತ್ವದ್ದು," ಎಂಬ ಸಂದೇಶ ನೀಡಿದರು.
ವಂದೇ ಮಾತರಂ ಶತೋತ್ತರ ಸಂಭ್ರಮ: ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯನ್ನು 150 ವಿದ್ಯಾರ್ಥಿಗಳ ಸಮ್ಮುಖದಲ್ಲಿ ಗೀತಗಾಯನದೊಂದಿಗೆ ವೇದಿಕೆಯಲ್ಲಿ ನೆರವೇರಿಸಲಾಯಿತು.
ದುಂಡಿರಾಜ್ ಅವರ ಉಪಸ್ಥಿತಿಯಲ್ಲಿ 'ಕ್ರಿಯೇಟಿವ್ ಸಾಹಿತ್ಯ ಸಾಂಗತ್ಯ' ಕಾರ್ಯಕ್ರಮ ಜರುಗಿತು. "ಯುವ ಮನಸ್ಸುಗಳ ಓದಿನ ಅಭ್ಯಾಸವೇ ಅವರ ಬದುಕಿನ ಶಕ್ತಿ ಕೇಂದ್ರ. ಪುಸ್ತಕವು ವ್ಯಕ್ತಿಯ ಚಿಂತನೆಗೆ ದಿಕ್ಕು ತೋರಿಸುವ ಗುರು," ಎಂದು ದುಂಡಿರಾಜ್ ಹೇಳಿದರು.
ಸಂಜೆ 4 ಗಂಟೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಾಚಾರ್ಯ ವಿದ್ವಾನ್ ಗಣಪತಿ ಭಟ್ ಅವರು ವಾರ್ಷಿಕ ವರದಿ ವಾಚಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ ರವರು "ಶಿಕ್ಷಣ ಎಂದರೆ ಕೇವಲ ಉದ್ಯೋಗ ಸಿಗುವ ಮಾರ್ಗವಲ್ಲ. ಅದು ವ್ಯಕ್ತಿತ್ವ ನಿರ್ಮಾಣದ ಮೂಲನೆಲೆ. ಯುವಜನಾಂಗ ಮಾನವೀಯತೆಯೊಂದಿಗೆ ಕೈಜೋಡಿಸಿದಾಗ ಸಮಾಜದಲ್ಲಿ ನಿಜವಾದ ಬದಲಾವಣೆ ಆಗುತ್ತದೆ," ಎಂದು ಹೇಳಿ, ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಸಂಸ್ಥೆ ಆರಂಭವಾಗಿ ಐದು ವರ್ಷಗಳು ಪೂರ್ಣಗೊಂಡ ಶುಭ ಸಂದರ್ಭದಲ್ಲಿ, ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬೋಧಕೇತರ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಜೆ 7 ರಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ "ಸಿಂದೂರ ಸಂಭ್ರಮ" ಪರಿಕಲ್ಪನೆಯ ಅತ್ಯಂತ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವ ಸಮಾರಂಭವು ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ, 2500 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ವರ್ಗದವರು, ಪೋಷಕರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.




