ಮೂಡುಬಿದಿರೆ: ಇಲ್ಲಿನ ಫೈನಾನ್ಸ್ ಒಂದರಲ್ಲಿ ವಾಹನ ಖರೀದಿಗೆ ಸಾಲ ಪಡೆದು ಮರುಪಾವತಿ ಮಾಡದೆ ವಂಚನೆ ಎಸಗಿದ ಪ್ರಕರಣದಲ್ಲಿ, ಸಾಲಗಾರನಿಗೆ ಜಾಮೀನು ನೀಡಿದ್ದ ಎರಡನೇ ಆರೋಪಿಯನ್ನು ಮೂಡುಬಿದಿರೆ ನ್ಯಾಯಾಲಯವು ಖುಲಾಸೆಗೊಳಿಸಿ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ:
ಸುಳ್ಯದ ಶ್ರೀನಿವಾಸ ಎಂಬ ವ್ಯಕ್ತಿ ಟಾಟಾ ಹಿಟಾಚಿ ವಾಹನ ಖರೀದಿಸಲು ಮೂಡುಬಿದಿರೆ ಶ್ರೀರಾಮ್ ಫೈನಾನ್ಸ್ ಶಾಖೆಯಿಂದ ದೊಡ್ಡ ಮೊತ್ತದ ಸಾಲ ಪಡೆದಿದ್ದರು. ಫೈನಾನ್ಸ್‌ನವರು ದಾಖಲಿಸಿದ ದೂರಿನ ಪ್ರಕಾರ, ಇದು ಸುಮಾರು ₹ 69 ಲಕ್ಷದಷ್ಟು ಮೊತ್ತವಾಗಿತ್ತು. ಆದರೆ, ಮುಖ್ಯ ಆರೋಪಿಯಾದ ಶ್ರೀನಿವಾಸ ಸಾಲವನ್ನು ಮರುಪಾವತಿ ಮಾಡದಿರುವುದಲ್ಲದೆ, ನ್ಯಾಯಾಲಯದ ವಿಚಾರಣೆಗೂ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ.
ಪ್ರಕರಣದಲ್ಲಿ, ಮುಖ್ಯ ಆರೋಪಿ ಶ್ರೀನಿವಾಸನಿಗೆ ಜಾಮೀನು ಹಾಕಿದ್ದ ಸುಳ್ಯದ ಕರುಣಾಕರ ಎಂಬಾತನ ವಿರುದ್ಧವೂ ಮೋಸ ಮತ್ತು ವಂಚನೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಯು ಮೂಡುಬಿದಿರೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.
ನ್ಯಾಯಾಲಯದಿಂದ ದೋಷಮುಕ್ತ:
ಪ್ರಕರಣದ ಕುರಿತು ಹಲವು ಬಾರಿ ವಿಚಾರಣೆ ನಡೆಸಿದ ನ್ಯಾಯಾಲಯವು, ಜಾಮೀನುದಾರನಾಗಿದ್ದ ಕರುಣಾಕರ ಅವರನ್ನು ದೋಷಮುಕ್ತಗೊಳಿಸಿ ಪ್ರಕರಣದಿಂದ ಖುಲಾಸೆಗೊಳಿಸಿದೆ. ಎರಡನೇ ಆರೋಪಿ ಕರುಣಾಕರ ಪರವಾಗಿ ಮೂಡುಬಿದಿರೆಯ ಯುವ ನ್ಯಾಯವಾದಿ ಮರ್ವಿನ್ ಜಾನ್ಸನ್ ಲೋಬೊ ಅವರು ಯಶಸ್ವಿಯಾಗಿ ವಾದಿಸಿದ್ದರು.

