ಮೂಡುಬಿದಿರೆ ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ

BIDIRE NEWS

ಮೂಡುಬಿದಿರೆ: ಎಕ್ಸಲೆಂಟ್  ಸಿ.ಬಿ.ಎಸ್.ಇ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಶಾಲಾ ವಾರ್ಷಿಕೋತ್ಸವವನ್ನು ಅತ್ಯಂತ ವೈಭವ ಮತ್ತು ಸಡಗರದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂಘಟಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರಿಂದ ಮೆಚ್ಚುಗೆ ಗಳಿಸಿದವು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭುವನ ಜ್ಯೋತಿ ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷರಾದ ಪ್ರಶಾಂತ್ ಡಿ’ಸೋಜಾ ಅವರು, ಎಕ್ಸಲೆಂಟ್ ಶಾಲೆ ತನ್ನ ಹೆಸರಿಗೆ ತಕ್ಕಂತೆ ಕ್ರಮಬದ್ಧ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಶಂಸಿಸಿದರು. ಸಿ.ಬಿ.ಎಸ್.ಇ. ಪಠ್ಯಕ್ರಮದ ಬದಲಾವಣೆಯೊಂದಿಗೆ ಶಿಕ್ಷಕರ ಬೋಧನಾ ಶೈಲಿಯೂ ಬದಲಾಗುತ್ತಿದ್ದು, ಇದರ ಸಂಪೂರ್ಣ ಸದುಪಯೋಗ ಪಡೆದು ವಿದ್ಯಾರ್ಥಿಗಳು ಪೋಷಕರು ಹೆಮ್ಮೆ ಪಡುವ ರೀತಿಯಲ್ಲಿ ಸಾಧನೆ ಮಾಡಬೇಕು ಎಂದರು.

ಮೈಸೂರು ಎಸ್.ಎಲ್.ವಿ. ಬುಕ್ ಏಜೆನ್ಸಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದಿವಾಕರ ದಾಸ್ ಅವರು ಮಾತನಾಡಿ, ಕೇವಲ ಅಂಕಗಳು ಮುಖ್ಯವಲ್ಲ, ಉತ್ತಮ ಸಂಸ್ಕಾರವು ಜೀವನದ ಉತ್ತುಂಗಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ತಿಳಿಸಿದರು.

ಎಕ್ಸಲೆಂಟ್ ಸಿ.ಬಿ.ಎಸ್.ಇ. ಶಾಲೆಯ ಹಳೆಯ ವಿದ್ಯಾರ್ಥಿ ಶ್ರೀ ಶಿಶಿರ್ ಹೆಚ್. ಶೆಟ್ಟಿ ಅವರು, ಒತ್ತಡದಾಯಕ ಕಲಿಕೆಗಿಂತ ಆನಂದದಾಯಕ ಕಲಿಕೆಯು ಉತ್ತಮ ಸಾಧನೆಗೆ ಪೂರಕವಾಗುತ್ತದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಅವರು, ಪೋಷಕರ ಬೆಂಬಲದಿಂದಲೇ ಎಕ್ಸಲೆಂಟ್ ಸಂಸ್ಥೆ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ ಜೈನ್ ಅವರು, ಸ್ವಯಂ ನಂಬಿಕೆ ಬದುಕಿಗೆ ಅತ್ಯಗತ್ಯ. ಮಿತಿಯನ್ನು ಗಮನಿಸದೆ, ಸಾಧ್ಯತೆಗಳ ಕಡೆಗೆ ಗಮನಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಿ.ಬಿ.ಎಸ್.ಇ. ಪ್ರಾಂಶುಪಾಲ ಶ್ರೀ ಪ್ರಸಾದ್ ಅವರು ಶಾಲೆಯ ವಾರ್ಷಿಕ ವರದಿಯನ್ನು ಮಂಡಿಸಿದರು.

 ವಿವಿಧ ಕ್ಷೇತ್ರಗಳ ಸಾಧಕರಾದ  ಪ್ರಶಾಂತ್ ಡಿ’ಸೋಜಾ,  ದಿವಾಕರ ದಾಸ್,  ಎಂ. ಗಣೇಶ್ ಕಾಮತ್ ಮತ್ತು ಸಂಸ್ಥೆಗೆ ಹೆಮ್ಮೆ ತಂದ ಹಳೆಯ ವಿದ್ಯಾರ್ಥಿ ಶ್ರೀ ಶಿಶಿರ್ ಹೆಚ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಿಶಿರ್ ಹೆಚ್. ಶೆಟ್ಟಿ ಅವರು ಕೆ-ಸೆಟ್, ಜೆ.ಇ.ಇ. ಮೈನ್ಸ್ (ಶೇಕಡಾ 99.96) ಹಾಗೂ ಜೆ.ಇ.ಇ. ಅಡ್ವಾನ್ಸ್‌ಡ್ ಮತ್ತು ಕಾಮಿಡ್‌ಕೆ ಪರೀಕ್ಷೆಗಳಲ್ಲಿ ಮೊದಲ ರ್‍ಯಾಂಕ್‌ಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಆಭಿನಂದಿಸಿದರು.

2024-25ನೇ ಸಾಲಿನ ಸಿ.ಬಿ.ಎಸ್.ಇ. ಬೋರ್ಡ್ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ರುಚಿರ ಕುಂದರ್ ಮತ್ತು ಆಂತಿಯ ಶೈನಾ ಮಿರಾಂಡಾ ಅವರನ್ನು ಗೌರವಿಸಲಾಯಿತು. ಶೈಕ್ಷಣಿಕ ಸಾಧನೆ ಗೈದ ಇತರ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಮೆರುಗನ್ನು ಇಮ್ಮಡಿಗೊಳಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ನಿರ್ದೇಶಕ ಡಾ. ಬಿ. ಪಿ. ಸಂಪತ್ ಕುಮಾರ್, ಸಿ.ಬಿ.ಎಸ್.ಇ. ಪ್ರಾಂಶುಪಾಲ ಶ್ರೀ ಪ್ರಸಾದ್, ಹಳೆಯ ವಿದ್ಯಾರ್ಥಿ ಶ್ರೀ ಶಿಶಿರ್, ಶಾಲಾ ನಾಯಕ ಶ್ರೀಕರ್ ಮತ್ತು ನಾಯಕಿ ನಿರೀಕ್ಷ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿ ಹರ್ಷಿತಾ ನಿರೂಪಿಸಿ, ಸಿ.ಬಿ.ಎಸ್.ಇ. ಸಂಯೋಜಕಿ ವಿಮಲಾ ಸ್ವಾಗತಿಸಿದರು. ವಿದ್ಯಾರ್ಥಿನಿ ನಿರೀಕ್ಷಾ ವಂದಿಸಿದರು.