ಪ್ರಾಂತ್ಯ ಶಾಲೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ: ಪರಿಸರ ನಿರ್ಮಾಣ ಕಾರ್ಯಕ್ರಮ

BIDIRE NEWS

ಮೂಡುಬಿದಿರೆ: ಇಂದಿನ ದಿನಗಳಲ್ಲಿ ವಿಶೇಷ ಚೇತನ ಮಕ್ಕಳು ಶಿಕ್ಷಣ, ಕ್ರೀಡೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸವಲತ್ತುಗಳನ್ನು ಒದಗಿಸುವುದು ಸರ್ಕಾರ ಮತ್ತು ಸಮಾಜದ ಕರ್ತವ್ಯವಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್  ಹೇಳಿದರು.

ಪುರಸಭೆ ವ್ಯಾಪ್ತಿಯ ಪ್ರಾಂತ್ಯದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಹಾಗೂ ಸಮನ್ವಯ ಶಿಕ್ಷಣ ಚಟುವಟಿಕೆಯಡಿಯಲ್ಲಿನ 'ಪರಿಸರ ನಿರ್ಮಾಣ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅನುದಾನ ಮತ್ತು ಸಹಕಾರದ ಅಗತ್ಯ

"ವಿಶೇಷ ಚೇತನರಿಗಾಗಿ ಸರ್ಕಾರವು ಶೇ. 5ರಷ್ಟು ಅನುದಾನವನ್ನು ಕಾಯ್ದಿರಿಸಿದೆ. ಅವರ ಶಿಕ್ಷಣ ಮತ್ತು ಆರೋಗ್ಯದ ಅಗತ್ಯತೆಗೆ ಸಹಕಾರವನ್ನು ನೀಡುವ ಮೂಲಕ ಅವರನ್ನು ಸಮಾಜದ ಎಲ್ಲರೊಂದಿಗೆ ಒಂದಾಗಿ, ಕೂಡಿ ಬದುಕುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ" ಎಂದು ಕುಸುಮಾಧರ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಹೆಚ್.ಎಸ್. ವಹಿಸಿದ್ದರು. ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ ಅವರು ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿ 'ಪರಿಸರ ನಿರ್ಮಾಣ' ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.


ಸಾಧಕರಿಗೆ ಸನ್ಮಾನ: 

ಕಾರ್ಯಕ್ರಮದಲ್ಲಿ ವಿಶೇಷ ಚೇತನ ಸಾಧಕ ವಿದ್ಯಾರ್ಥಿಗಳಾದ ಎಕ್ಸಲೆಂಟ್‌ನ ಯಶ್ವಿತ್ ಮತ್ತು ಆಳ್ವಾಸ್‌ನ ಕೌಶಿಕ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನಗರ ಪುನರ್ವಸತಿ ಕಾರ್ಯಕರ್ತೆ ಸವಿತಾ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯರಾದ ಪ್ರಿಯಾಂಕ, ವನಿತಾ, ಹಾಗೂ ಆಕಾಶ್ ಆಚಾರ್ಯ ಮತ್ತು ಸತೀಶ ಅವರನ್ನು ಕೂಡ ಗೌರವಿಸಲಾಯಿತು.

ತಾಲೂಕು ಆರೋಗ್ಯ ನಿರೀಕ್ಷಕ ಖಾದರ್ ಎನ್., ಪ್ರಾಂತ್ಯ ಶಾಲೆಯ ಮುಖ್ಯ ಶಿಕ್ಷಕ ರಾಮಚಂದ್ರ, ಅಲಂಗಾರು ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ರಿಚಾರ್ಡ್ ಡಿ'ಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕ್ಷೇತ್ರ ಸಮನ್ವಯಾಧಿಕಾರಿ ಸೌಮ್ಯಾ ಎನ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಾಂತ್ಯ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಚಂದ್ರ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕಿ ಫ್ಲೇವಿ ಡಿ'ಸೋಜಾ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ವಿಶೇಷ ಚೇತನರ ಪೋಷಕರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಜಾಗೃತಿ ಮತ್ತು ಅರಿವು ಕಾರ್ಯಾಗಾರ ನಡೆಯಿತು.