ಬೆಳುವಾಯಿ ಕೆಸರುಗದ್ದೆ ಮುಕ್ತಾನಂದ ಪ್ರೌಢ ಶಾಲೆಯ ಸ್ಥಾಪಕ ಜೆ. ಎಂ. ಪಡುಬಿದ್ರಿ (ಜಗನ್ನಾಥ ಶೆಟ್ಟಿ) ನಿಧನ

BIDIRE NEWS

ಮೂಡುಬಿದಿರೆ: ವಿದ್ಯಾವರ್ಧಕ ಸಂಘ, ಬೆಳುವಾಯಿ ಇದರ ಆಡಳಿತದಲ್ಲಿ ನಡೆಸಲ್ಪಡುವ ಬೆಳುವಾಯಿ ಕೆಸರುಗದ್ದೆಯ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆ, ಕೆಸರಗದ್ದೆ, ಬೆಳುವಾಯಿ ಸ್ಥಾಪಕ ಜೆ. ಎಂ. ಪಡುಬಿದ್ರಿ (ಜಗನ್ನಾಥ ಶೆಟ್ಟಿ)(87) ಅವರು ಶನಿವಾರ ಬೆಳುವಾಯಿಯಲ್ಲಿ ನಿಧನರಾಗಿದ್ದಾರೆ. ಅವರು ಪತ್ನಿ, ಪುತ್ರಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.



ತಮ್ಮ ಜೀವನದಲ್ಲಿ ಶಿಕ್ಷಣ, ಉದ್ಯಮ ಮತ್ತು ಕಲೆಯಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದ್ದರು. ಬಾಲ್ಯದಲ್ಲಿ ಮುಂಬಯಿಗೆ ತೆರಳಿದ್ದ ಅವರು, ಹಗಲಿನಲ್ಲಿ ಕ್ಯಾಂಟೀನ್ ಉದ್ಯೋಗ ಮಾಡುತ್ತಲೇ ರಾತ್ರಿ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಮುಂಬೈಯಲ್ಲಿ ಅವರು ಯಂಗ್ ಮೆನ್ ಸೊಸೈಟಿ ಈವ್ನಿಂಗ್ ಸ್ಕೂಲ್ ಅನ್ನು ಸ್ಥಾಪಿಸಿ, ಅದರ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

ನಂತರ ಮುಂಬೈಯಲ್ಲಿ ಜೆ ಎಮ್ಸ್ ಕೆಟರಿಂಗ್ ಎಂಬ ಸ್ವಂತ ಉದ್ದಿಮೆಯನ್ನು ಯಶಸ್ವಿಯಾಗಿ ನಡೆಸಿದರು. ಅಲ್ಲದೆ, ಹರಿಹರದಲ್ಲಿರುವ ಆದಿತ್ಯ ಬಿರ್ಲಾ ಗ್ರೂಪ್‌ನ ಗ್ರಾಸಿಂ ಇಂಡಸ್ಟ್ರೀಸ್‌ನಲ್ಲಿ ಉದ್ಯೋಗಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಶಿಕ್ಷಣ ಮತ್ತು ಉದ್ಯಮದ ಜೊತೆಗೆ ಅವರು ಕಲಾ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದರು. ಚಲನಚಿತ್ರವಾಗಿ ಜನಪ್ರಿಯವಾದ 'ಗುಡ್ಡದ ಭೂತ' ನಾಟಕದಲ್ಲಿ ಅವರು ನಟಿಸಿದ್ದರು. ಜೊತೆಗೆ, ಅವರು ಜನಪದ ನೃತ್ಯವಾದ ಕಂಗಿಲು ಕಲಾವಿದರಾಗಿದ್ದು, ಅನೇಕ ಕಾರ್ಯಕ್ರಮಗಳನ್ನು ನೀಡಿದ್ದರು.

ಮೂಲತಃ ಸಿಪಾಯಿ ಮನೆ, ಪಡುಬಿದ್ರಿಯವರಾಗಿದ್ದ ಅವರು, ನಂತರ ಬೆಳುವಾಯಿಯಲ್ಲಿ ವಾಸವಾಗಿದ್ದು, ಸ್ಥಳೀಯರಿಗೆ ಅನುಕೂಲವಾಗುವಂತೆ ಬೆಳುವಾಯಿಯಲ್ಲಿ ಪ್ರೌಢಶಾಲೆಯನ್ನು ಸ್ಥಾಪಿಸಿದರು.