ಮೂಡುಬಿದಿರೆ: ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ 'ಪ್ರತಿಭಾ ಪರ್ವ': ವಾರ್ಷಿಕೋತ್ಸವ, ಬಹುಮಾನ ವಿತರಣೆ

BIDIRE NEWS

ಮೂಡುಬಿದಿರೆ: ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ, ಕಲ್ಲಬೆಟ್ಟು ಇದರ ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಸಮಾರಂಭ ಗುರುವಾರ ನಡೆಯಿತು.

ಉದ್ಯಮಿ ತಿಮ್ಮಯ್ಯ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು. "ಈ ವೇದಿಕೆಯಲ್ಲಿ ನಿಂತಿರುವುದು ನನಗೆ ಸಂತೋಷ ಮತ್ತು ಗೌರವದ ವಿಷಯ. ಶಿಕ್ಷಣ, ಶಿಸ್ತು ಮತ್ತು ಸದಾಚಾರದ ಮೌಲ್ಯಗಳನ್ನು ಬೆಳೆಸುವಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯು ಪ್ರಮುಖ ಪಾತ್ರವನ್ನು ವಹಿಸುತ್ತಿದೆ" ಎಂದು ಅವರು ಸಂಸ್ಥೆಯನ್ನು ಪ್ರಶಂಸಿಸಿದರು. ಸಂಸ್ಥೆಯು ಸುಧಾರಿತ ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡುತ್ತಿರುವುದನ್ನು ಶ್ಲಾಘಿಸಿದ ಅವರು, ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ನಿಜಕ್ಕೂ ಭಾಗ್ಯವಂತರು ಎಂದು ಹೇಳಿದರು.

ಮೂಡುಬಿದಿರೆ ತಾಲೂಕು ಕಚೇರಿಯ ಕಂದಾಯ ಅಧಿಕಾರಿ ಬಿ. ಮಂಜುನಾಥ್ ಅವರು ಮಾತನಾಡಿ, ಕ್ರೀಡೆಯು ಜೀವನದಲ್ಲಿ ಶಿಸ್ತನ್ನು ಕಲಿಸುತ್ತದೆ ಎಂದು ಹೇಳಿದರು. ಪ್ರತಿ ವಿದ್ಯಾರ್ಥಿಯೂ ತನ್ನದೇ ಆದ ವಿಶಿಷ್ಟ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಹೊಂದಿರುತ್ತಾನೆ ಎಂದು ನೆನಪಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಣದಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶ್ಲಾಘನೀಯ ಪದಕ, ಪ್ರಶಸ್ತಿ ಪತ್ರಗಳು ಮತ್ತು ವಿಶೇಷ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಅವರು ಮಾತನಾಡಿ, ಜೀವನದಲ್ಲಿ ಯಶಸ್ಸು ಗಳಿಸಲು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ಅತ್ಯಗತ್ಯ ಎಂದು ಕರೆ ನೀಡಿದರು.

ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಪುಷ್ಪರಾಜ್, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಉಪಮುಖ್ಯ ಶಿಕ್ಷಕ ಜಯಶೀಲ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಶಿಕ್ಷಕರಾದ ಪ್ರಜ್ವಲ್ ಶೆಟ್ಟಿ, ಅನಿತಾ, ಮಂಜೂಷಾ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಪೃಥ್ವಿ ಶೆಟ್ಟಿ ಸ್ವಾಗತಿಸಿ, ರಕ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.