ಬಸ್ ನಿಲ್ಲಲು ಜಾಗವಿಲ್ಲದ ಬೆದ್ರ ನಿಲ್ದಾಣ!: ವಾರಗಳ ಭರವಸೆ, ತಿಂಗಳ ನಂತರವೂ ಈಡೇರಿಲ್ಲ-ತೀವ್ರ ಹದಗೆಟ್ಟ ಪಾರ್ಕಿಂಗ್

BIDIRE NEWS

ಮೂಡುಬಿದಿರೆ: ಪೇಟೆ ಹಾಗೂ ಬಸ್ ನಿಲ್ದಾಣದ ಸುತ್ತಮುತ್ತಲಿನ ಪಾರ್ಕಿಂಗ್  ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ನಾಗರಿಕರಿಂದ ನಿರಂತರ ಬೇಡಿಕೆಗಳು, ಮತ್ತು ಸಾಮಾನ್ಯ ಹಾಗೂ ವಿಶೇಷ ಸಭೆಗಳಲ್ಲಿ ತೀವ್ರ ಚರ್ಚೆಗಳು ನಡೆದಿದ್ದರೂ, ಮೂಡುಬಿದಿರೆ ಬಸ್ ನಿಲ್ದಾಣ ಮತ್ತು ಪೇಟೆಯ ಪಾರ್ಕಿಂಗ್ ವ್ಯವಸ್ಥೆಗಳು ಸುಧಾರಿಸದೆ ಮತ್ತಷ್ಟು ಬಿಗಾಡಾಯಿಸಿವೆ. ಆಡಳಿತ ಮಂಡಳಿಯು "ಒಂದು ವಾರದೊಳಗೆ ಕ್ರಮ ಕೈಗೊಳ್ಳುತ್ತೇವೆ" ಎಂದು ನೀಡಿದ ಭರವಸೆ ತಿಂಗಳು ಕಳೆದರೂ ಈಡೇರಿಲ್ಲ.



ಮೂಡುಬಿದಿರೆ ಪುರಸಭೆ ಅಧೀನದಲ್ಲಿರುವ ಖಾಸಗಿ ಬಸ್ ನಿಲ್ದಾಣವು ಮಂಗಳೂರು, ಕಾರ್ಕಳ, ಬಂಟ್ವಾಳ, ಬೆಳ್ತಂಗಡಿ, ಮೂಲ್ಕಿ ಸೇರಿದಂತೆ ವಿವಿಧ ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಜನರ ಬೇಡಿಕೆಗೆ ಅನುಗುಣವಾಗಿ ಬಸ್‌ಗಳ ಸಂಖ್ಯೆಯೂ ಹೆಚ್ಚಿದೆ. ಆದರೂ, ನಿಲ್ದಾಣದ ಆವರಣದಲ್ಲಿ ಖಾಸಗಿ ವಾಹನಗಳ ಅಕ್ರಮ ಪಾರ್ಕಿಂಗ್ ಮಿತಿಮೀರಿದೆ. ಇದರಿಂದಾಗಿ ಬಸ್ ಚಾಲಕರು ಮತ್ತು ನಿರ್ವಾಹಕರು ಬಸ್‌ಗಳನ್ನು ನಿಲುಗಡೆ ಮಾಡಲು ತೀವ್ರವಾಗಿ ಕಷ್ಟಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.


 ಶೌಚಾಲಯ ಪ್ರವೇಶಕ್ಕೆ ತೊಂದರೆ:

 ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಪಾದಚಾರಿಗಳಿಗೆ ಓಡಾಡಲು ಅವಕಾಶ ನೀಡದಂತೆ ನಿಲುಗಡೆ ಮಾಡಲಾಗುತ್ತಿದೆ.

 ಸಂಕೀರ್ಣದ ಹಿಂಭಾಗದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ತೆರಳಲು ಸಹ ಜನರು ಕಷ್ಟಪಡುತ್ತಿದ್ದಾರೆ. ಶೌಚಾಲಯದ ಮುಂದೆ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶವಿದ್ದರೂ, ವಾಣಿಜ್ಯ ಸಂಕೀರ್ಣದ ಮುಂಭಾಗ ಮತ್ತು ದಾರಿಯ ಮಧ್ಯೆ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುವುದರಿಂದ ಜನರಿಗೆ ತೊಂದರೆಯಾಗುತ್ತಿದೆ.

ಪುರಸಭೆಯವರು ಇತ್ತೀಚೆಗೆ ನೆಲದ ಮೇಲೆ 'ನೋ ಪಾರ್ಕಿಂಗ್' ಎಂದು ಸೂಚನೆ ಬರೆದಿದ್ದರೂ, ಅದರ ಮೇಲೆಯೇ ವಾಹನಗಳನ್ನು ನಿಲ್ಲಿಸುವವರ ಸಂಖ್ಯೆ ಹೆಚ್ಚಿದೆ.ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಸುಸ್ಥಿತಿಗೆ ತರುವ ಕುರಿತು ಪುರಸಭೆ, ಪೊಲೀಸ್ ಇಲಾಖೆ, ಬಸ್ ಮಾಲೀಕರ ಸಂಘ ಹಾಗೂ ವಾಣಿಜ್ಯ ಸಂಕೀರ್ಣದ ವ್ಯಾಪಾರಿಗಳ ನಡುವೆ ಜಂಟಿ ಸಭೆ ನಡೆಸಲಾಗಿತ್ತು. ಆ ಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

 ಖಾಸಗಿ ವಾಹನಗಳ ದಟ್ಟಣೆಯನ್ನು ನಿಯಂತ್ರಿಸುವುದು. ವಾಣಿಜ್ಯ ಸಂಕೀರ್ಣದ ಎದುರು ಕೇವಲ ಒಂದು ಸಾಲಿನಲ್ಲಿ ಗ್ರಾಹಕರ ದ್ವಿಚಕ್ರ ವಾಹನಗಳಿಗೆ ಮಾತ್ರ ಪಾರ್ಕಿಂಗ್ ಅವಕಾಶ ಕಲ್ಪಿಸುವುದು. ಅಂಗಡಿಗಳ ಬಾಡಿಗೆದಾರರಿಗೆ ಸೇರಿದ ದ್ವಿಚಕ್ರ ವಾಹನಗಳನ್ನು ಸಾರ್ವಜನಿಕ ಶೌಚಾಲಯದ ಸುತ್ತಮುತ್ತ ಸುಸ್ಥಿತಿಯಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡುವುದು.ಇವುಗಳು ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು.

ಆದರೆ, ತಿಂಗಳು ಕಳೆದರೂ ಆಡಳಿತ ಮಂಡಳಿಯು ಈ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಯಾವುದೇ ಕ್ರಮ ಕೈಗೊಳ್ಳದಿರುವ ಕಾರಣದಿಂದಾಗಿ, ಬೇಕಾಬಿಟ್ಟಿ ವಾಹನ ನಿಲುಗಡೆ ಮತ್ತಷ್ಟು ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಪೇಟೆ ಹಾಗೂ ಬಸ್ ನಿಲ್ದಾಣದಲ್ಲಿ ಜನರು ಓಡಾಡಲು ಕಷ್ಟಪಡುತ್ತಿದ್ದಾರೆ ಮತ್ತು ಖಾಸಗಿ ವಾಹನಗಳಿಂದ ಸ್ಪಷ್ಟವಾಗಿ ಕಾನೂನು ಉಲ್ಲಂಘನೆ ಆಗುತ್ತಿದೆ.ಬಸ್ ನಿಲ್ದಾಣವನ್ನು ಪ್ರಮುಖವಾಗಿ ಸಾರ್ವಜನಿಕ ಸಾರಿಗೆ ಸೌಲಭ್ಯಕ್ಕಾಗಿ ಮೀಸಲಿಡಬೇಕು. ಕೂಡಲೇ ಪುರಸಭೆಯು, ಈ ಹಿಂದಿನ ಸಭೆಯ ನಿರ್ಣಯಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ದಂಡ ವಿಧಿಸಲು ಮತ್ತು ಅಗತ್ಯವಿದ್ದರೆ ವಾಹನಗಳನ್ನು ಲಾಕ್ ಮಾಡುವ ಮೂಲಕ ದಟ್ಟಣೆಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟವರು ತುರ್ತು ಸ್ಪಂದನೆ ನೀಡದೆ ನಿರ್ಲಕ್ಷಿಸಿದಲ್ಲಿ ಜಿಲ್ಲಾ ಮಟ್ಟದ ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದ

-ಶೀನಾ ಮಾಸ್ತಿ ಕಟ್ಟೆ, ಸಾಮಾಜಿಕ ಹೋರಾಟಗಾರರು.