ಮೂಡುಬಿದಿರೆ: ಭಾರತದ ಪ್ರಥಮ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನದ ಅಂಗವಾಗಿ, ಅವರ ಹೆಸರು ಹೊತ್ತ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯಲ್ಲಿ ಶ್ರೀ ಮಹಾವೀರ ವಿದ್ಯಾವರ್ಧಕ ಸಂಘದ ವತಿಯಿಂದ ಶಾಲೆಗೆ 58 ವರ್ಷಗಳು ತುಂಬಿದ ಸಂಭ್ರಮದಲ್ಲಿ ವಾರ್ಷಿಕೋತ್ಸವವನ್ನು ಬುಧವಾರ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಬಿ.ಆರ್.ಪಿ. ಮತ್ತು ಶ್ರೀ ಮಹಾವೀರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕೆ. ಅಭಯಚಂದ್ರ ಅವರು, "58 ವರ್ಷಗಳ ಹಿಂದೆ ಅಂಕಗಳ ಮುಖ ನೋಡದೆ, ವಿಶೇಷವಾಗಿ ಬಡವರ ಶಿಕ್ಷಣದ ಕನಸನ್ನು ನನಸು ಮಾಡಲು ಈ ಶಾಲೆ ಸ್ಥಾಪನೆಯಾಯಿತು. ಈ ಶಾಲೆ ಉತ್ತಮ ಫಲಿತಾಂಶವನ್ನು ವ್ಯಕ್ತಪಡಿಸುತ್ತ ಬಂದಿದೆ. ಹೀಗಾಗಿ, ವಿದ್ಯಾಭಿಮಾನಿಗಳು ಮತ್ತು ಹಳೆ ವಿದ್ಯಾರ್ಥಿಗಳು ಶಾಲೆಯ ಪ್ರಗತಿಗಾಗಿ ಮುಕ್ತ ಸಹಕಾರ ನೀಡಬೇಕು" ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ವಿರೂಪಾಕ್ಷಪ್ಪ, ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ರಾಘವೇಂದ್ರ ಭಟ್, ಬೊಲ್ಪು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಶ್ರಿನಿತ್ ಶೆಟ್ಟಿ, ಉದ್ಯಮಿ ಸುಶಾಂತ್ ಕರ್ಕೇರಾ ಮತ್ತು ಮಾರೂರು ಭಾಗವಹಿಸಿದ್ದರು.
ಹಳೆ ವಿದ್ಯಾರ್ಥಿಗಳಾದ ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ನಾಯ್ಕ್ ಹಾಗೂ ಉದ್ಯಮಿ ಪೃಥ್ವೀರಾಜ್ ಸ್ವಸ್ತಿವಾಚನ ಮಾಡಿದರು.
ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆ. ವಿಜಯಲಕ್ಷ್ಮೀ ಮಾರ್ಲ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಡಾ. ರಾಮಕೃಷ್ಣ ಶಿರೂರು, ಶಾಲಾ ಸಂಚಾಲಕ ರಾಮ್ ನಾಥ್ ಭಟ್, ಉಪಾಧ್ಯಕ್ಷ ಪುಷ್ಪರಾಜ್ ಜೈನ್, ರಾಮಪ್ರಸಾದ್ ಭಟ್, ನಿವೃತ್ತ ಮುಖ್ಯಶಿಕ್ಷಕಿ ಪದ್ಮಜಾ, ಟ್ರಸ್ಟ್ ಕೋಶಾಧಿಕಾರಿ ದಾಮೋದರ ಆಚಾರ್ಯ ಮತ್ತು ವಿದ್ಯಾರ್ಥಿ ನಾಯಕ ಪ್ರಣಾಮ್ ಉಪಸ್ಥಿತರಿದ್ದರು.
ಶಿಕ್ಷಕ ಕಿರಣ್ ಕುಮಾರ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ತೆರೆಜಾ ಕರ್ಡೋಜಾ ವಾರ್ಷಿಕ ವರದಿ ವಾಚನ ಮಾಡಿದರು. ಶಿಕ್ಷಕರಾದ ಅಣ್ಣು ಮತ್ತು ಪ್ರಶಾಂತ್ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಶಿಕ್ಷಕ ವೆಂಕಟರಮಣ ಕೆರೆಗದ್ದೆ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಕಲಾಪಗಳು ನಡೆದವು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಶಂಕರ್ ಭಟ್, ದ್ವಿತೀಯ ದರ್ಜೆ ಸಹಾಯಕಿಯರಾದ ಮೇಬಲ್ ಸಿಂತಿಯಾ ಮೆಂಡೋನ್ಸಾ ಹಾಗೂ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಲಿರುವ ಶಾಲಾ ಸಿಬ್ಬಂದಿ ಜಿತೇಶ್ ಅವರನ್ನು ಗೌರವಿಸಲಾಯಿತು.



